﻿ಕೀರ್ತ.
81.
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಗಿತ್ತೀಯ ರಾಗದಿಂದ ಹಾಡತಕ್ಕದ್ದು; ಆಸಾಫನ ಕೀರ್ತನೆ. ನಮಗೆ ಬಲಪ್ರದನಾಗಿರುವ ದೇವರಿಗೆ ಉತ್ಸಾಹಧ್ವನಿ ಮಾಡಿರಿ; ಯಾಕೋಬ್ಯರ ದೇವರಿಗೆ ಜಯಘೋಷಮಾಡಿರಿ. 
ರಾಗವನ್ನು ಎತ್ತಿರಿ; ದಮ್ಮಡಿಯನ್ನು ಬಡಿಯಿರಿ; ಇಂಪಾದ ಕಿನ್ನರಿಯನ್ನೂ, ಸ್ವರಮಂಡಲವನ್ನೂ ಬಾರಿಸಿರಿ. 
ಅಮಾವಾಸ್ಯೆಯಲ್ಲಿಯೂ, ನಮ್ಮ ಉತ್ಸವದಿನವಾಗಿರುವ ಹುಣ್ಣಿಮೆಯಲ್ಲಿಯೂ ಕೊಂಬನ್ನು ಊದಿರಿ. 
ಇದು ಇಸ್ರಾಯೇಲರಲ್ಲಿ ಒಂದು ಕಟ್ಟಳೆ; ಇದು ಯಾಕೋಬ್ಯರ ದೇವರು ವಿಧಿಸಿದ್ದು. 
ಆತನು ಐಗುಪ್ತ ದೇಶವನ್ನು ಬಾಧಿಸಲಿಕ್ಕೆ ಹೊರಟಾಗ, ನೆನಪಿಗಾಗಿ ಯೋಸೇಫ್ಯರಲ್ಲಿ ಈ ಕಟ್ಟಳೆಯನ್ನು ನೇಮಿಸಿದನು. ಪರಿಚಯವಿಲ್ಲದವನ ಮಾತು ನನಗೆ ಕೇಳಿಸುತ್ತದೆ; ಏನೆಂದರೆ, 
“ಅವನ ಹೆಗಲನ್ನು ಹೊರೆಗೆ ತಪ್ಪಿಸಿದೆನು; ಅವನ ಕೈಗಳನ್ನು ಪುಟ್ಟಿಯಿಂದ ಬಿಡಿಸಿದೆನು. 
ಕಷ್ಟದಲ್ಲಿ ಮೊರೆಯಿಟ್ಟ ನಿನ್ನನ್ನು ವಿಮೋಚಿಸಿದೆನು; ಗುಡುಗುವ ಮೋಡದಲ್ಲಿದ್ದು ನಿನಗೆ ಉತ್ತರವನ್ನು ಕೊಟ್ಟೆನು; ಮೆರೀಬಾ ಪ್ರವಾಹಗಳ ಬಳಿಯಲ್ಲಿ ನಿನ್ನನ್ನು ಪರೀಕ್ಷಿಸಿದೆನು. ಸೆಲಾ. 
ನನ್ನ ಜನರೇ, ಕೇಳಿರಿ; ಖಂಡಿತವಾಗಿ ಹೇಳುತ್ತೇನೆ, ಇಸ್ರಾಯೇಲರೇ, ಕಿವಿಗೊಟ್ಟರೆ ಎಷ್ಟೋ ಒಳ್ಳೇದು, 
ನಿಮ್ಮಲ್ಲಿ ಅನ್ಯದೇವತೆಗಳು ಇರಬಾರದು; ಪರರ ದೇವತೆಗಳನ್ನು ಪೂಜಿಸಬಾರದು; 
ನಿಮ್ಮನ್ನು ಐಗುಪ್ತದಿಂದ ಕರೆತಂದ ಯೆಹೋವನೆಂಬ ನಾನೇ ನಿಮ್ಮ ದೇವರು; ಅಗಲವಾಗಿ ಬಾಯಿತೆರೆಯಿರಿ; ಅದನ್ನು ತುಂಬಿಸುವೆನು ಅಂದೆನು. 
ಆದರೆ ನನ್ನ ಜನರು ನನ್ನ ಮಾತು ಕೇಳಲಿಲ್ಲ; ಇಸ್ರಾಯೇಲರು ನನಗೆ ಸಮ್ಮತಿಸಲಿಲ್ಲ. 
ಆದುದರಿಂದ ಇವರು ಹಟಮಾರಿಗಳು; ತಮ್ಮ ಮನಸ್ಸಿನಂತೆ ನಡೆಯಲಿ ಎಂದು ಬಿಟ್ಟುಬಿಟ್ಟೆನು. 
ನನ್ನ ಪ್ರಜೆಗಳಾದ ಇಸ್ರಾಯೇಲರು ನನ್ನ ಮಾತನ್ನು ಕೇಳಿ, ನನ್ನ ಮಾರ್ಗದಲ್ಲಿ ನಡೆದರೆ ಎಷ್ಟೋ ಒಳ್ಳೆಯದು! 
ನಾನು ಅವರ ಎದುರಾಳಿಗಳ ಮೇಲೆ ಕೈಯೆತ್ತಿ, ಅವರ ಶತ್ರುಗಳನ್ನು ಸುಲಭವಾಗಿ ಬಗ್ಗಿಸುವೆನು. 
ಯೆಹೋವನ ದ್ವೇಷಿಗಳು ಅವರ ಮುಂದೆ ಮುದುರಿಕೊಳ್ಳುವರು; ಅವರಾದರೋ ಸದಾಕಾಲವೂ ಇರುವರು. 
ನಾನು ಅವರಿಗೆ ಶ್ರೇಷ್ಠವಾದ ಗೋದಿಯನ್ನು ಊಟಕ್ಕೆ ಕೊಟ್ಟು, ಬಂಡೆಯೊಳಗಿನ ಜೇನಿನಿಂದ ತೃಪ್ತಿಪಡಿಸುವೆನು” ಎಂಬುದೇ. 
