﻿ಕೀರ್ತ.
104.
ನನ್ನ ಮನವೇ, ಯೆಹೋವನನ್ನು ಕೊಂಡಾಡು. ಯೆಹೋವನೇ, ನನ್ನ ದೇವರೇ, ನೀನು ಸರ್ವೋತ್ತಮನು; ಪ್ರಭಾವ ಮತ್ತು ಮಹತ್ವಗಳಿಂದ ಭೂಷಿತನಾಗಿರುವೆ. 
ಬೆಳಕನ್ನು ವಸ್ತ್ರದಂತೆ ಹೊದ್ದುಕೊಂಡಿರುವೆ; ಆಕಾಶವನ್ನು ಗುಡಾರದಂತೆ ಎತ್ತಿ ಹರಡಿರುವೆ. 
ನೀರಿನ ಮೇಲೆ ತೊಳೆಗಳನ್ನು ನಿಲ್ಲಿಸಿ ಉಪ್ಪರಿಗೆಗಳನ್ನು ಕಟ್ಟಿಕೊಂಡು; ಮೋಡಗಳನ್ನು ವಾಹನವಾಗಿ ಮಾಡಿಕೊಂಡಿರುವೆ; ವಾಯುವಿನ ರೆಕ್ಕೆಗಳ ಮೇಲೆ ಸಂಚರಿಸುತ್ತೀ. 
ಗಾಳಿಯನ್ನು ನಿನ್ನ ದೂತರನ್ನಾಗಿಯೂ, ಅಗ್ನಿಜ್ವಾಲೆಯನ್ನು ಸೇವಕರನ್ನಾಗಿಯೂ ಮಾಡಿಕೊಳ್ಳುತ್ತೀ. 
ಭೂಮಿಯು ಯುಗಯುಗಾಂತರಕ್ಕೂ ಕದಲದ ಹಾಗೆ ಅದನ್ನು ದೃಢವಾದ ಅಸ್ತಿವಾರದ ಮೇಲೆ ಸ್ಥಾಪಿಸಿದ್ದೀ. 
ನೀನು ಅದನ್ನು ಆದಿಸಾಗರವೆಂಬ ವಸ್ತ್ರದಿಂದ ಹೊದಿಸಿದ್ದೀ; ನೀರು ಪರ್ವತಗಳನ್ನೂ ಮುಚ್ಚಿಬಿಟ್ಟಿತ್ತು. 
ನೀನು ಗದರಿಸಲು ಅದು ಓಡಿಹೋಯಿತು; ನಿನ್ನ ಗರ್ಜನೆಗೆ ಹೆದರಿ ನೀನು ನೇಮಿಸಿದ ಸ್ಥಳಕ್ಕೆ ಹೋಗಲು, 
ಪರ್ವತಗಳು ಎದ್ದವು; ತಗ್ಗುಗಳು ಇಳಿದವು. 
ಜಲರಾಶಿಗಳು ಬಂದು ಪುನಃ ಭೂಮಿಯನ್ನು ಮುಚ್ಚಿಕೊಳ್ಳದ ಹಾಗೆ, ನೀನು ಮೇರೆಗಳನ್ನು ಗೊತ್ತುಮಾಡಿದಿ. 
ಬುಗ್ಗೆಗಳನ್ನು ತಗ್ಗುಗಳಿಗೆ ಬರಮಾಡುತ್ತೀ; ಅವು ಪರ್ವತಗಳ ನಡುವೆ ಹರಿದುಹೋಗುತ್ತವೆ. 
ಅವು ಅಡವಿಯ ಮೃಗಗಳಿಗೆ ನೀರುಕೊಡುತ್ತವೆ; ಕಾಡುಕತ್ತೆಗಳು ದಾಹ ತೀರಿಸಿಕೊಳ್ಳುತ್ತವೆ. 
ಪಕ್ಷಿಗಳು ಅವುಗಳ ಬಳಿಯ ಮರಗಳ ಕೊಂಬೆಗಳಲ್ಲಿ ವಾಸವಾಗಿದ್ದು ಗಾನಮಾಡುತ್ತವೆ. 
ನೀನು ನಿನ್ನ ಮೇಲಂತಸ್ತುಗಳಿಂದ ಪರ್ವತಗಳಿಗೆ ನೀರು ಕೊಡುತ್ತೀ; ನಿನ್ನ ಕಾರ್ಯಫಲದಿಂದ ಭೂಮಿಯು ತೃಪ್ತಿಹೊಂದುತ್ತದೆ. 
ಪಶುಗಳಿಗೋಸ್ಕರ ಹುಲ್ಲನ್ನು ಮೊಳಿಸುತ್ತೀ; ಮನುಷ್ಯರಿಗೋಸ್ಕರ ಪೈರುಗಳನ್ನು ಹುಟ್ಟಿಸುತ್ತೀ. ಅವರು ಭೂವ್ಯವಸಾಯಮಾಡಿ ಆಹಾರವನ್ನು, 
ಹೃದಯಾನಂದಕರವಾದ ದ್ರಾಕ್ಷಾರಸವನ್ನು, ಮುಖಕ್ಕೆ ಕಾಂತಿಯನ್ನು ಉಂಟುಮಾಡುವ ಎಣ್ಣೆಯನ್ನು, ಪ್ರಾಣಾಧಾರವಾದ ರೊಟ್ಟಿಯನ್ನು ಸಂಪಾದಿಸಿಕೊಳ್ಳುತ್ತಾರೆ. 
ಯೆಹೋವನು ನೆಟ್ಟ ಮರಗಳಾದ ಲೆಬನೋನಿನ ದೇವದಾರು ವೃಕ್ಷಗಳಿಗೆ ಬೇಕಾದಷ್ಟು ಜಲವಿರುತ್ತದೆ. 
ಪಕ್ಷಿಗಳು ಅವುಗಳಲ್ಲಿ ಗೂಡು ಕಟ್ಟಿಕೊಳ್ಳುತ್ತವೆ; ತುರಾಯಿ ಮರಗಳಲ್ಲಿ ಬಕಪಕ್ಷಿಗಳು ವಾಸಿಸುತ್ತವೆ. 
ಕಾಡಕುರಿಗಳಿಗೆ ಉನ್ನತವಾದ ಪರ್ವತಗಳೂ, ಬೆಟ್ಟದ ಮೊಲಗಳಿಗೆ ಬಂಡೆಗಳೂ ಆಶ್ರಯಸ್ಥಾನಗಳಾಗಿವೆ. 
ವಿಶೇಷಕಾಲಗಳ ಸೂಚನೆಗಾಗಿ ಚಂದ್ರನನ್ನು ನಿರ್ಮಿಸಿರುವೆ; ಸೂರ್ಯನು ತನ್ನ ಅಸ್ತಮಾನ ಸಮಯವನ್ನು ಬಲ್ಲನು. 
ನೀನು ಕತ್ತಲೆಯನ್ನು ಬರಮಾಡಲು ರಾತ್ರಿಯಾಗುತ್ತದೆ. ಆಗ ಕಾಡಿನ ಮೃಗಗಳೆಲ್ಲಾ ಹೊರಬರುತ್ತವೆ. 
ಪ್ರಾಯದ ಸಿಂಹಗಳು ಬೇಟೆಗಾಗಿ ಗರ್ಜಿಸುತ್ತವೆ; ದೇವರಿಂದ ಆಹಾರವನ್ನು ಕೇಳಿಕೊಳ್ಳುತ್ತವೆ. 
ಸೂರ್ಯೋದಯವಾಗಲು ಅವು ಬಂದು ತಮ್ಮ ಗವಿಗಳಲ್ಲಿ ಮಲಗಿಕೊಳ್ಳುತ್ತವೆ. 
ಮನುಷ್ಯನು ತನ್ನ ಕೆಲಸಕ್ಕೆ ಹೊರಟು ಹೋಗುತ್ತಾನೆ; ಸಾಯಂಕಾಲದವರೆಗೆ ದುಡಿಯುತ್ತಾನೆ. 
ಯೆಹೋವನೇ, ನಿನ್ನ ಕೈಕೆಲಸಗಳು ಬಗೆ ಬಗೆಯಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿರುವೆ; ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ. 
ಇಗೋ, ಬಹುವಿಶಾಲವಾದ ಸಮುದ್ರವು! ಅದರೊಳಗೆ ಲೆಕ್ಕವಿಲ್ಲದಷ್ಟು ಸಣ್ಣ, ದೊಡ್ಡ ಜೀವಜಂತುಗಳು ಚಲಿಸುತ್ತಿರುತ್ತವೆ. 
ಅದರಲ್ಲಿ ಹಡಗುಗಳು ಸಂಚರಿಸುತ್ತವೆ ನೀನು ಉಂಟುಮಾಡಿದ ಲಿವ್ಯಾತಾನವು ಅದರಲ್ಲಿ ಆಡುತ್ತದೆ. 
ಇವುಗಳು ಹೊತ್ತುಹೊತ್ತಿಗೆ ಆಹಾರಕ್ಕೋಸ್ಕರ ನಿನ್ನನ್ನೇ ನಿರೀಕ್ಷಿಸುತ್ತವೆ. 
ನೀನು ಕೊಡಲು ಅವು ತೆಗೆದುಕೊಳ್ಳುತ್ತವೆ; ನೀನು ಕೈತೆರೆಯಲು ಅವು ಒಳ್ಳೇಯದನ್ನು ಹೊಂದಿ ತೃಪ್ತಿಗೊಳ್ಳುತ್ತವೆ. 
ನೀನು ವಿಮುಖನಾಗಲು ತಲ್ಲಣಿಸುತ್ತವೆ; ಅವುಗಳ ಶ್ವಾಸವನ್ನು ತೆಗೆದುಬಿಡಲು ಅವು ಸತ್ತು ತಿರುಗಿ ಮಣ್ಣಿಗೆ ಸೇರುತ್ತವೆ. 
ನೀನು ಜೀವಶ್ವಾಸವನ್ನು ಊದಲು ಅವು ಹೊಸದಾಗಿ ಹುಟ್ಟುತ್ತವೆ. ನೀನು ಭೂಮಿಯನ್ನು ನೂತನಪಡಿಸುತ್ತಿರುತ್ತಿ. 
ಯೆಹೋವನ ಮಹಿಮೆಯು ಸದಾಕಾಲವೂ ಇರಲಿ; ಯೆಹೋವನಿಗೆ ಆತನ ಸೃಷ್ಟಿಗಳಿಂದ ಸಂತೋಷವಾಗಲಿ. 
ಆತನು ದೃಷ್ಟಿಸಿದ ಮಾತ್ರದಿಂದಲೇ ಭೂಮಿಯು ಕಂಪಿಸುತ್ತದೆ; ಮುಟ್ಟುತ್ತಲೇ ಪರ್ವತಗಳು ಹೊಗೆಹಾಯುತ್ತವೆ. 
ನಾನು ಬದುಕಿರುವವರೆಗೂ ಯೆಹೋವನನ್ನು ಕೀರ್ತಿಸುತ್ತಿರುವೆನು; ಜೀವಮಾನವೆಲ್ಲಾ ನನ್ನ ದೇವರನ್ನು ಭಜಿಸುತ್ತಿರುವೆನು. 
ನನ್ನ ಧ್ಯಾನದಿಂದ ಆತನಿಗೆ ಮೆಚ್ಚಿಕೆಯಾಗಲಿ; ನಾನಾದರೋ ಯೆಹೋವನಲ್ಲಿ ಆನಂದಿಸುವೆನು. 
ಪಾಪಾತ್ಮರು ಭೂಲೋಕದಲ್ಲಿ ಮುಗಿದುಹೋಗಲಿ; ದುಷ್ಟರು ನಿರ್ಮೂಲವಾಗಲಿ. ನನ್ನ ಮನವೇ, ಯೆಹೋವನನ್ನು ಕೊಂಡಾಡು; ಯೆಹೋವನಿಗೆ ಸ್ತೋತ್ರ. 
