﻿ಕೀರ್ತ.
128.
ಯಾತ್ರಾಗೀತೆ. ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ, ಆತನ ಮಾರ್ಗಗಳಲ್ಲಿ ನಡೆಯುವವನು ಧನ್ಯನು. 
ನಿನ್ನ ಕಷ್ಟಾರ್ಜಿತವನ್ನು ನೀನೇ ಅನುಭವಿಸುವಿ, ನೀನು ಧನ್ಯನು, ನಿನಗೆ ಶುಭವಿರುವುದು. 
ಅಂತಃಪುರದಲ್ಲಿರುವ ನಿನ್ನ ಹೆಂಡತಿಯು, ಫಲಭರಿತವಾದ ದ್ರಾಕ್ಷಾಲತೆಯಂತೆ ಇರುವಳು; ನಿನ್ನ ಸಂಗಡ ಊಟದ ಮಣೆಯ ಸುತ್ತಲೂ ಕುಳಿತುಕೊಳ್ಳುವ ನಿನ್ನ ಮಕ್ಕಳು, ಎಣ್ಣೇಮರದ ಸಸಿಗಳ ಹಾಗೆ ಇರುವರು. 
ಇಗೋ, ಯೆಹೋವನಲ್ಲಿ ಭಯಭಕ್ತಿಯುಳ್ಳ ಪುರುಷನು, ಈ ರೀತಿಯಾಗಿ ಆಶೀರ್ವಾದ ಹೊಂದುವನು. 
ಚೀಯೋನಿನಲ್ಲಿರುವ ಯೆಹೋವನು ನಿನ್ನನ್ನು ಆಶೀರ್ವದಿಸಲಿ; ಜೀವಮಾನವೆಲ್ಲಾ ಯೆರೂಸಲೇಮಿನ ಸೌಭಾಗ್ಯವನ್ನು ನೋಡುವವನಾಗು. 
ಮಕ್ಕಳ ಮಕ್ಕಳನ್ನು ಕಾಣುವವನಾಗು. ಇಸ್ರಾಯೇಲರಿಗೆ ಶುಭವಾಗಲಿ. 
