﻿ಯೋಬ.
16.
ಯೋಬನು ಉತ್ತರಕೊಟ್ಟು ಹೇಳಿದ್ದೇನೆಂದರೆ: 
“ನಾನು ಇವುಗಳ ಹಾಗೆ ಅನೇಕ ಮಾತುಗಳನ್ನು ಕೇಳಿದ್ದೇನೆ; ನೀವೆಲ್ಲರೂ ಆದರಣೆ ಕೊಡುವವರಲ್ಲ, ಬಾಧಿಸುವವರೇ. 
ನಿಮ್ಮ ವ್ಯರ್ಥ ಮಾತುಗಳಿಗೆ ಅಂತ್ಯ ಇಲ್ಲವೋ? ನನ್ನೊಂದಿಗೆ ವಾದಿಸಲು ನಿಮ್ಮನ್ನು ಒತ್ತಾಯಪಡಿಸಿದ್ದೇನು? 
ನೀವು ನನ್ನ ಸ್ಥಿತಿಯಲ್ಲಿ ಇದ್ದಿದ್ದರೆ, ನಾನು ಸಹ ನಿಮ್ಮ ಹಾಗೆ ಮಾತಾಡುತ್ತಿದ್ದೆ; ನಾನು ನಿಮ್ಮ ವಿರುದ್ಧ ಪದಪ್ರಯೋಗಿಸಿ ಮಾತಾಡಬಹುದಾಗಿತ್ತು; ಹೌದು, ನಿಮ್ಮ ವಿಷಯದಲ್ಲಿ ಗೇಲಿ ಮಾಡುತ್ತಾ, ನಾನು ನನ್ನ ತಲೆಯಾಡಿಸಬಹುದಾಗಿತ್ತು. 
ಆದರೆ, ನಾನು ನನ್ನ ಬಾಯಿಮಾತಿನಿಂದ ನಿಮ್ಮನ್ನು ಪ್ರೋತ್ಸಾಹಿಸುವೆನು; ನನ್ನ ಆದರಣೆಯ ಮಾತುಗಳು ನಿಮಗೆ ಉಪಶಮನ ಮಾಡುವುದು. 
“ನಾನು ಮಾತನಾಡಿದರೂ ನನ್ನ ನೋವಿಗೆ ಉಪಶಮನವಾಗುವುದಿಲ್ಲ; ನಾನು ಮೌನವಾಗಿದ್ದರೂ, ನನ್ನ ನೋವು ನಿವಾರಣೆಯಾಗುವುದಿಲ್ಲ. 
ದೇವರೇ, ನೀವು ನನ್ನನ್ನು ಬಲಹೀನಪಡಿಸಿದ್ದೀರಿ; ನೀವು ನನ್ನ ಕುಟುಂಬದವರನ್ನೆಲ್ಲಾ ಇಲ್ಲದಂತೆ ಮಾಡಿದ್ದೀರಿ. 
ನೀವು ನನ್ನ ಮುಖವೆಲ್ಲಾ ಸುಕ್ಕುಗಳಿಂದ ತುಂಬಿಸಿದ್ದೀರಿ; ನನ್ನ ಬಿಕ್ಕಟ್ಟೇ ನನಗೆ ವಿರೋಧವಾಗಿ ಎದ್ದು ಸಾಕ್ಷಿ ಕೊಡುತ್ತವೆ; 
ದೇವರು ತಮ್ಮ ಬೇಸರದಲ್ಲಿ ನನ್ನನ್ನು ದಂಡಿಸಿದ್ದಾರೆ; ನನ್ನ ದೇವರು ನನ್ನ ಮೇಲೆ ಅತೃಪ್ತರಾಗಿದ್ದಾರೆ; ನನ್ನ ವೈರಿಯು ನನ್ನನ್ನು ದ್ವೇಷದಿಂದ ನೋಡುತ್ತಿದ್ದಾನೆ. 
ನನ್ನ ಮೇಲೆ ಜನರು ತಮ್ಮ ಬಾಯಿ ಕಿಸಿಯುತ್ತಾರೆ; ನಿಂದಿಸಿ ನನ್ನ ಕೆನ್ನೆಗಳನ್ನು ಬಡಿಯುತ್ತಾರೆ, ನನಗೆ ವಿರೋಧವಾಗಿ ಕೂಡಿಕೊಳ್ಳುತ್ತಾರೆ. 
ದೇವರು ನನ್ನನ್ನು ದುಷ್ಟರ ಕೈಗೆ ಒಪ್ಪಿಸಿಬಿಟ್ಟಿದ್ದಾರೆ; ಹೌದು, ದುಷ್ಟರ ಕೈಗೆ ನನ್ನನ್ನು ಎಸೆದುಬಿಟ್ಟಿದ್ದಾರೆ. 
ನಾನು ನೆಮ್ಮದಿಯಿಂದ ಇದ್ದಾಗ ದೇವರು ನನ್ನನ್ನು ಚದರಿಸಿದ್ದಾರೆ; ನಾನು ಮಡಕೆ ಒಡೆದುಬಿದ್ದಂತೆ ಇದ್ದೇನೆ. ನನ್ನನ್ನು ತಮಗೆ ಗುರಿ ಹಲಗೆಯಾಗಿ ನಿಲ್ಲಿಸಿಕೊಂಡಿದ್ದಾರೆ. 
ದೇವರ ಬಾಣಗಳು ನನ್ನನ್ನು ಸುತ್ತುವರಿದಿವೆ; ನಾನು ಕರುಣೆಯಿಲ್ಲದೆ ನೆಲದ ಮೇಲೆ ಪಿತ್ತವನ್ನು ಸುರಿದು ಬಿದ್ದವನಂತೆ ಇದ್ದೇನೆ. ನನ್ನ ಪಿತ್ತವನ್ನು ಭೂಮಿಗೆ ಚೆಲ್ಲುತ್ತಾರೆ. 
ದೇವರು ಮತ್ತೆ ಮತ್ತೆ ನನ್ನನ್ನು ಮುರಿಯುತ್ತಿದ್ದಾರೆ; ಅದು ಶೂರನು ಓಡಿಬಂದು ನನ್ನ ಮೇಲೆ ದಾಳಿಮಾಡಿದಂತಿದೆ. 
“ನಾನು ಗೋಣಿತಟ್ಟು ಹೊಲಿದು ನನ್ನ ಮೈಮೇಲೆ ಹಾಕಿಕೊಂಡಿದ್ದೇನೆ; ನನ್ನ ಗೌರವವನ್ನು ಧೂಳಿನಲ್ಲಿ ಮರೆಮಾಡಿದ್ದೇನೆ. 
ನನ್ನ ಮುಖವು ಅಳುವುದರಿಂದ ಕೆಂಪಾಯಿತು; ನನ್ನ ರೆಪ್ಪೆಗಳ ಮೇಲೆ ಮರಣದ ಅಂಧಕಾರವು ಕವಿದಿದೆ. 
ಆದರೂ ನನ್ನ ಕೈಗಳಲ್ಲಿ ಹಿಂಸಾಚಾರವಿಲ್ಲ; ನನ್ನ ಪ್ರಾರ್ಥನೆಯು ಶುದ್ಧವಾಗಿದೆ. 
“ಭೂಮಿಯೇ, ನನ್ನ ರಕ್ತವನ್ನು ಮುಚ್ಚಬೇಡ, ನನ್ನ ಕೂಗು ವಿಶ್ರಾಂತಿ ಹೊಂದದಿರಲಿ! 
ಈಗಲೂ ಪರಲೋಕದಲ್ಲಿ ನನಗೆ ಒಬ್ಬ ಸಾಕ್ಷಿ ಇದ್ದಾರೆ; ಹೌದು, ನನ್ನ ವಕೀಲರು ಉನ್ನತದಲ್ಲಿದ್ದಾರೆ. 
ಆದರೆ ನನ್ನ ಮಿತ್ರ ನನಗಾಗಿ ವಿಜ್ಞಾಪನೆಮಾಡುತ್ತಿದ್ದಾರೆ; ನನ್ನ ಕಣ್ಣುಗಳು ದೇವರ ಮುಂದೆ ಕಣ್ಣೀರು ಸುರಿಸುತ್ತವೆ. 
ಒಬ್ಬ ಮನುಷ್ಯನು ತನ್ನ ಮಿತ್ರನಿಗೋಸ್ಕರ ಬೇಡಿಕೊಳ್ಳುವಂತೆ, ಅವರು ಸಹ ಮನುಷ್ಯನಿಗಾಗಿ ದೇವರ ಮುಂದೆ ವಾದಿಸುತ್ತಿದ್ದಾರೆ. 
“ನಾನು ಹಿಂದಿರುಗಿ ಬಾರದ ದಾರಿಯನ್ನು ಹಿಡಿಯಲು, ಇನ್ನೂ ಕೆಲವೇ ವರ್ಷಗಳು ಉಳಿದಿವೆ. 
