﻿ಯೋಬ.
29.
ಯೋಬನು ಮತ್ತೆ ತನ್ನ ಚರ್ಚೆಯನ್ನು ಮುಂದುವರಿಸಿ ಹೇಳಿದ್ದೇನೆಂದರೆ: 
“ಕಳೆದುಹೋದ ತಿಂಗಳುಗಳಲ್ಲಿ ಇದ್ದಂತೆ ಈಗಲೂ ಇದ್ದರೆ ಎಷ್ಟೋ ಒಳ್ಳೆಯದು; ಆಗ ದೇವರು ನನ್ನನ್ನು ಕಾಪಾಡುತ್ತಿದ್ದರಲ್ಲವೆ? 
ದೇವರ ದೀಪವು ನನ್ನ ತಲೆಯ ಮೇಲೆ ಬೆಳಗುತ್ತಿತ್ತು; ನಾನು ದೇವರ ಬೆಳಕಿನಿಂದ ಕತ್ತಲಲ್ಲಿ ನಡೆಯುತ್ತಿದ್ದೆ. 
ನಾನು ನನ್ನ ಯೌವನದ ದಿವಸಗಳಲ್ಲಿದ್ದಾಗ ದೇವರ ಸ್ನೇಹವು ನನ್ನ ಗುಡಾರದ ಮೇಲೆ ಇರುತ್ತಿತ್ತು. 
ಆಗ ಸರ್ವಶಕ್ತರು ನನ್ನ ಸಂಗಡ ಇರುತ್ತಿದ್ದರು; ನನ್ನ ಸುತ್ತಲೂ ನನ್ನ ಮಕ್ಕಳು ಇದ್ದರು. 
ನನ್ನ ಹೆಜ್ಜೆಗಳನ್ನು ಮೊಸರಿನಿಂದ ತೊಳೆಯುತ್ತಾ ಇದ್ದೆನು; ಬಂಡೆಯಿಂದ ನನಗೆ ಓಲಿವ್ ಎಣ್ಣೆ ಪ್ರವಾಹವಾಗಿ ಸುರಿಸುತ್ತಿತ್ತು. 
“ನಾನು ಪಟ್ಟಣದ ಮುಂಬಾಗಿಲಿಗೆ ಹೋದಾಗ, ಬೀದಿಯಲ್ಲಿ ನನ್ನ ಪೀಠದ ಮೇಲೆ ಕುಳಿತುಕೊಂಡಾಗ, 
ಯುವಕರು ನನ್ನನ್ನು ನೋಡಿ ಪಕ್ಕಕ್ಕೆ ಸರಿದು ನಿಲ್ಲುತ್ತಿದ್ದರು; ವೃದ್ಧರು ಸಹ ಎದ್ದು ನಿಲ್ಲುತ್ತಿದ್ದರು. 
ಪ್ರಧಾನರು ನುಡಿಗಳನ್ನು ಬಿಗಿ ಹಿಡಿದು, ತಮ್ಮ ಬಾಯಿಯ ಮೇಲೆ ಕೈ ಇಟ್ಟುಕೊಳ್ಳುತ್ತಿದ್ದರು. 
ಘನವಂತರು ಮೌನ ತಾಳುತ್ತಿದ್ದರು; ಅವರ ನಾಲಿಗೆ ಅವರ ಬಾಯಿಯ ಅಂಗಳಕ್ಕೆ ಅಂಟಿರುತ್ತಿತ್ತು. 
ಕೇಳಿದ ಕಿವಿಯು ನನ್ನನ್ನು ಹರಸುತ್ತಿತ್ತು; ನೋಡಿದವರು ನನ್ನನ್ನು ಗೌರವಿಸುತ್ತಿದ್ದರು. 
ಏಕೆಂದರೆ ಅಂಗಲಾಚುವ ಬಡವನನ್ನೂ, ಸಹಾಯಕನಿಲ್ಲದ ಅನಾಥನನ್ನೂ ನಾನು ರಕ್ಷಿಸುವವನಾಗಿದ್ದೆನು. 
ಸಾಯುತ್ತಿದ್ದವರ ಆಶೀರ್ವಾದವು ನನ್ನ ಮೇಲೆ ಬರುತ್ತಿತ್ತು; ವಿಧವೆಯ ಹೃದಯವು ಸಂತೋಷದಿಂದ ಹಾಡುವಂತೆ ಮಾಡುತ್ತಿದ್ದೆನು. 
ನಾನು ನೀತಿಯನ್ನು ನನ್ನ ಬಟ್ಟೆಯಂತೆ ಧರಿಸಿದ್ದೆನು; ನನ್ನ ನ್ಯಾಯವು ನಿಲುವಂಗಿಯ ಹಾಗೆಯೂ ಪೇಟದ ಹಾಗೆಯೂ ಇರುತ್ತಿತ್ತು. 
ನಾನು ಕುರುಡನಿಗೆ ಕಣ್ಣೂ, ಕುಂಟನಿಗೆ ಕಾಲೂ ಆಗಿದ್ದೆನು. 
ದರಿದ್ರರಿಗೆ ನಾನು ತಂದೆಯಾಗಿದ್ದೆನು; ಅಪರಿಚಿತರ ವ್ಯಾಜ್ಯವನ್ನು ವಿಚಾರಿಸುತ್ತಿದ್ದೆನು. 
ದುಷ್ಟರ ದವಡೆಗಳನ್ನು ಮುರಿಯುತ್ತಿದ್ದೆನು; ದುಷ್ಟರ ಹಲ್ಲುಗಳೊಳಗಿಂದ ಬೇಟೆಯನ್ನು ಕಿತ್ತು ಬಿಡಿಸುತ್ತಿದ್ದೆನು. 
“ಆಗ ನಾನು, ‘ನನ್ನ ಮನೆಯಲ್ಲಿಯೇ ನಾನು ಸಾಯುವೆನು; ಮರಳಿನಂತೆ ನನ್ನ ದಿವಸಗಳು ಇರುತ್ತವೆ, 
ನನ್ನ ಬೇರು ನೀರಿನ ಬಳಿ ಹಬ್ಬಿರುತ್ತದೆ; ರಾತ್ರಿಯಿಡಿ ನನ್ನ ಕೊಂಬೆಯ ಮೇಲೆ ಮಂಜು ಬಿದ್ದಿರುತ್ತದೆ. 
ನನ್ನ ಘನವು ನನ್ನಲ್ಲಿ ಹೊಸದಾಗಿ ಇರುತ್ತದೆ; ನನ್ನ ಬಿಲ್ಲು ಸಹ ನನ್ನ ಕೈಯಲ್ಲಿ ಎಂದೆಂದಿಗೂ ಬಲಗೊಳ್ಳುತ್ತಾ ಇರುತ್ತದೆ,’ ಎಂದೆಲ್ಲಾ ಹೇಳುತ್ತಿದ್ದೆನು. 
“ಜನರು ನನಗೆ ಕಿವಿಗೊಟ್ಟು ಎದುರುನೋಡುತ್ತಿದ್ದರು. ನನ್ನ ಆಲೋಚನೆ ಕೇಳಲು ಮೌನವಾಗಿರುತ್ತಿದ್ದರು. 
ನನ್ನ ಮಾತಿನ ಮೇಲೆ ಅವರು ಬೇರೆ ಮಾತನಾಡುತ್ತಿರಲಿಲ್ಲ; ನನ್ನ ನುಡಿ ಅವರ ಕಿವಿಗೆ ಬೀಳುತ್ತಿತ್ತು. 
ಮಳೆಯಂತೆ ನನ್ನನ್ನು ಎದುರುನೋಡುತ್ತಿದ್ದರು. ಮುಂಗಾರಿನ ಮಳೆಯಹಾಗೆ ನನ್ನ ಮಾತುಗಳಲ್ಲಿ ಉಲ್ಲಾಸಿಸುತ್ತಿದ್ದರು. 
ನಾನು ಅವರನ್ನು ನೋಡಿ ಮುಗುಳ್ನಗಿದಾಗ, ಅವರು ಅದನ್ನು ನಂಬಲಿಲ್ಲ; ನನ್ನ ಮುಖದ ಕಾಂತಿ ಅವರಿಗೆ ಅಮೂಲ್ಯವಾಗಿತ್ತು. 
ನಾನು ಅವರ ಪ್ರಧಾನನಾಗಿ ಕೂತು ಸೈನ್ಯಗಳ ನಡುವೆ ಅರಸನಂತೆ ಆಸೀನನಾಗಿದ್ದೆನು. ನಾನು ದುಃಖಿಸುವವರನ್ನು ಸಂತೈಸುವವನಾಗಿಯೂ ಇದ್ದೆನು. 
