﻿ಕೀರ್ತನೆಗಳು.
24.
ದಾವೀದನ ಕೀರ್ತನೆ. ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವ ದೇವರದ್ದೇ; ಲೋಕವೂ ಅದರ ನಿವಾಸಿಗಳೂ ಅವರಿಗೇ ಸೇರಿದ್ದು. 
ಏಕೆಂದರೆ ಅವರು ಸಮುದ್ರಗಳ ಮೇಲೆ ಅದನ್ನು ಸ್ಥಾಪಿಸಿ ಪ್ರವಾಹಗಳ ಮೇಲೆ ಅದನ್ನು ಸ್ಥಿರಪಡಿಸಿದ್ದಾರೆ. 
ಯೆಹೋವ ದೇವರ ಪರ್ವತವನ್ನು ಹತ್ತುವವನು ಯಾರು? ಅವರ ಪರಿಶುದ್ಧ ಸ್ಥಳದಲ್ಲಿ ನಿಲ್ಲುವವನು ಯಾರು? 
ಶುದ್ಧಹಸ್ತಗಳೂ ನಿರ್ಮಲವಾದ ಹೃದಯವೂ ಉಳ್ಳವನಾಗಿದ್ದು; ವಂಚನೆಯಿಂದ ಮುಕ್ತನಾಗಿ, ಮೋಸದಿಂದ ಆಣೆ ಇಡದೆಯೂ ಇರುವವನೇ. 
ಇಂಥವರೇ ಯೆಹೋವ ದೇವರಿಂದ ಆಶೀರ್ವಾದವನ್ನು ಹೊಂದುವರು. ತಮ್ಮ ರಕ್ಷಕ ಆಗಿರುವ ದೇವರಿಂದಲೇ ನಿರ್ದೋಷಿಯಾಗುವರು. 
ಇಂಥವರೇ ದೇವರನ್ನು ಹುಡುಕುವ ಸಂತತಿಯು; ಯಾಕೋಬನ ದೇವರೇ, ನಿಮ್ಮನ್ನು ಹುಡುಕುವವರು ಇಂಥವರೇ. 
ದ್ವಾರಗಳೇ ತಲೆ ಎತ್ತಿ ನೋಡಿರಿ, ಪುರಾತನ ದ್ವಾರಗಳೇ, ತೆರೆದುಕೊಳ್ಳಿರಿ; ಮಹಿಮೆಯ ಅರಸ ಒಳಗೆ ಬರಲಿದ್ದಾರೆ. 
ಈ ಮಹಿಮೆಯ ಅರಸ ಯಾರು? ಬಲವೂ ಪರಾಕ್ರಮವೂ ಉಳ್ಳ ಯೆಹೋವ ದೇವರೇ ಆಗಿರುತ್ತಾರೆ. ಯೆಹೋವ ದೇವರು ಯುದ್ಧದಲ್ಲಿ ಪರಾಕ್ರಮವುಳ್ಳವರು ಆಗಿರುತ್ತಾರೆ. 
ದ್ವಾರಗಳೇ, ತಲೆ ಎತ್ತಿ ನೋಡಿರಿ, ಪುರಾತನ ದ್ವಾರಗಳೇ, ತೆರೆದುಕೊಳ್ಳಿರಿ; ಮಹಿಮೆಯ ಅರಸ ಒಳಗೆ ಬರಲಿದ್ದಾರೆ. 
ಮಹಿಮೆಯ ಅರಸ ಯಾರು? ಸೇನಾಧೀಶ್ವರ ಯೆಹೋವ ದೇವರೇ ಆಗಿರುತ್ತಾರೆ. ಇವರೇ ಮಹಿಮೆಯ ಅರಸರು. 
