﻿ಕೀರ್ತನೆಗಳು.
29.
ದಾವೀದನ ಕೀರ್ತನೆ. ದೇವದೂತರೇ, ಬಲವು ಯೆಹೋವ ದೇವರದೇ, ಮಹಿಮೆ ಯೆಹೋವ ದೇವರದೇ ಎಂದು ಹೇಳಿ ಕೊಂಡಾಡಿರಿ. 
ಯೆಹೋವ ದೇವರ ನಾಮಕ್ಕೆ ಸಲ್ಲತಕ್ಕ ಘನವನ್ನು ಸಲ್ಲಿಸಿರಿ; ಪರಿಶುದ್ಧತ್ವವೆಂಬ ವಸ್ತ್ರದೊಡನೆ ಯೆಹೋವ ದೇವರನ್ನು ಆರಾಧಿಸಿರಿ. 
ಯೆಹೋವ ದೇವರ ಧ್ವನಿಯು ಜಲರಾಶಿಗಳ ಮೇಲೆ ಇದೆ; ಮಹಿಮೆಯ ದೇವರು ಇದ್ದಾರೆ; ಯೆಹೋವ ದೇವರು ಮಹಾಸಾಗರಗಳ ಮೇಲೆ ಇದ್ದಾರೆ. 
ಯೆಹೋವ ದೇವರ ಧ್ವನಿಯು ಶಕ್ತಿಯುಳ್ಳದ್ದು; ಯೆಹೋವ ದೇವರ ಧ್ವನಿಯು ವೈಭವವುಳ್ಳದ್ದು. 
ಯೆಹೋವ ದೇವರ ಧ್ವನಿಯು ದೇವದಾರು ವೃಕ್ಷಗಳನ್ನು ಮುರಿಯುತ್ತದೆ; ಯೆಹೋವ ದೇವರು ಲೆಬನೋನಿನ ದೇವದಾರು ವೃಕ್ಷಗಳನ್ನು ಮುರಿಯುತ್ತಾರೆ. 
ಲೆಬನೋನ್ ಪರ್ವತವು ಕರುವಿನ ಹಾಗೆಯೂ ಸಿರ್ಯೋನ್ ಬೆಟ್ಟವು ಎಳೆಯ ಕಾಡುಕೋಣದ ಹಾಗೆಯೂ ಹಾರಾಡುವಂತೆ ಮಾಡುತ್ತಾರೆ. 
ಯೆಹೋವ ದೇವರ ಧ್ವನಿಯು ಸಿಡಿಲಿನ ಮಿಂಚಿನಂತೆ ಅಪ್ಪಳಿಸುತ್ತದೆ. 
ಯೆಹೋವ ದೇವರ ಶಬ್ದವು ಮರುಭೂಮಿಯನ್ನು ನಡುಗಿಸುತ್ತದೆ; ಯೆಹೋವ ದೇವರು ಕಾದೇಶ್ ಮರುಭೂಮಿಯನ್ನು ನಡುಗಿಸುತ್ತಾರೆ. 
ಯೆಹೋವ ದೇವರ ಧ್ವನಿಯು ಜಿಂಕೆಗಳು ಈಯುವಂತೆ ಮಾಡಿ ಅಡವಿಗಳನ್ನು ಬಯಲು ಮಾಡುತ್ತದೆ; ದೇವರ ಮಂದಿರದಲ್ಲಿ ಪ್ರತಿಯೊಬ್ಬರೂ “ಮಹಿಮೆ!” ಎಂದು ಘೋಷಿಸುತ್ತಾರೆ. 
ಯೆಹೋವ ದೇವರು ಪ್ರಳಯದ ಮೇಲೆ ಕುಳಿತುಕೊಳ್ಳುತ್ತಾರೆ; ಯುಗಯುಗಕ್ಕೂ ಯೆಹೋವ ದೇವರು ಅರಸರಾಗಿ ಕುಳಿತುಕೊಂಡಿದ್ದಾರೆ. 
ಯೆಹೋವ ದೇವರು ತಮ್ಮ ಜನರಿಗೆ ಬಲವನ್ನು ಕೊಡುವರು; ಯೆಹೋವ ದೇವರು ತಮ್ಮ ಜನರನ್ನು ಸಮಾಧಾನದಿಂದ ಆಶೀರ್ವದಿಸುವರು. 
