﻿ಕೀರ್ತನೆಗಳು.
98.
ಒಂದು ಕೀರ್ತನೆ. ಯೆಹೋವ ದೇವರಿಗೆ ಹೊಸಹಾಡನ್ನು ಹಾಡಿರಿ; ಏಕೆಂದರೆ ಅವರು ಅದ್ಭುತಗಳನ್ನು ಮಾಡಿದ್ದಾರೆ; ಅವರ ಬಲಗೈಯೂ, ಅವರ ಪರಿಶುದ್ಧ ಭುಜವು ಅವರಿಗೆ ಜಯವನ್ನು ತಂದಿವೆ. 
ಯೆಹೋವ ದೇವರು ತಮ್ಮ ರಕ್ಷಣೆಯನ್ನು ತಿಳಿಯಪಡಿಸಿದ್ದಾರೆ; ರಾಷ್ಟ್ರಗಳಿಗೆ ತಮ್ಮ ನೀತಿಯನ್ನು ಪ್ರಕಟಪಡಿಸಿದ್ದಾರೆ. 
ಇಸ್ರಾಯೇಲರ ಕಡೆಗೆ ತಮ್ಮ ಪ್ರೀತಿಯನ್ನೂ, ತಮ್ಮ ಸತ್ಯತೆಯನ್ನೂ ಜ್ಞಾಪಕ ಮಾಡಿಕೊಂಡಿದ್ದಾರೆ; ಭೂಮಿಯ ಅಂತ್ಯಗಳಲ್ಲೆವೂ ನಮ್ಮ ದೇವರ ರಕ್ಷಣೆಯನ್ನು ನೋಡಿವೆ. 
ಸಮಸ್ತ ಭೂನಿವಾಸಿಗಳೇ, ಯೆಹೋವ ದೇವರಿಗೆ ಆನಂದಘೋಷ ಮಾಡಿರಿ. ಉತ್ಸಾಹಧ್ವನಿ ಮಾಡಿ ಸಂಗೀತದಿಂದ ಸ್ತುತಿಹಾಡಿರಿ. 
ಯೆಹೋವ ದೇವರಿಗೆ ಕಿನ್ನರಿಯಿಂದ ಗಾನಮಾಡಿರಿ. ಕಿನ್ನರಿಯಿಂದಲೂ, ಕೀರ್ತನೆಯ ಶಬ್ದದಿಂದಲೂ ಹಾಡಿರಿ. 
ತುತೂರಿಗಳಿಂದಲೂ, ಹೌದು, ಟಗರಿನ ಕೊಂಬಿನಿಂದಲೂ ಯೆಹೋವ ರಾಜರ ಮುಂದೆ ಆನಂದಘೋಷ ಮಾಡಿರಿ. 
ಸಮುದ್ರವೂ, ಅದರಲ್ಲಿರುವುದೆಲ್ಲವೂ, ಲೋಕವೂ, ಅದರ ನಿವಾಸಿಗಳೂ ಪ್ರತಿಧ್ವನಿಸಲಿ. 
ನದಿಗಳು ಚಪ್ಪಾಳೆ ತಟ್ಟಲಿ. ಬೆಟ್ಟಗಳು ಒಟ್ಟುಗೂಡಿ ಆನಂದ ಕೀರ್ತನೆ ಹಾಡಲಿ. 
ಅವು ಯೆಹೋವ ದೇವರ ಮುಂದೆ ಹಾಡಲಿ, ಏಕೆಂದರೆ ಅವರು ಭೂಮಿಗೆ ನ್ಯಾಯತೀರಿಸಲು ಬರುತ್ತಾರೆ. ಅವರು ಲೋಕಕ್ಕೆ ನೀತಿಗನುಸಾರವಾಗಿಯೂ ಜನರಿಗೆ ನ್ಯಾಯಾನುಸಾರವಾಗಿಯೂ ತೀರ್ಪು ನೀಡುವರು. 
