﻿ಕೀರ್ತನೆಗಳು.
101.
ದಾವೀದನ ಕೀರ್ತನೆ. ನಿಮ್ಮ ಪ್ರೀತಿ ನೀತಿಗಳನ್ನು ಕುರಿತು ಹಾಡುವೆನು; ಯೆಹೋವ ದೇವರೇ, ನಿಮ್ಮನ್ನು ಸ್ತುತಿಸುವೆನು. 
ದೋಷರಹಿತ ಮಾರ್ಗದಲ್ಲಿ ನಡೆಯಲು ಜಾಗರೂಕನಾಗಿರುವೆನು; ನೀವು ಯಾವಾಗ ನನ್ನ ಬಳಿಗೆ ಬರುವಿರಿ? ನಾನು ನಿರ್ದೋಷ ಹೃದಯದಿಂದ ನನ್ನ ಮನೆಯೊಳಗೆ ನಡೆದುಕೊಳ್ಳುವೆನು. 
ನಾನು ಕೆಟ್ಟ ಕಾರ್ಯವನ್ನು ನನ್ನ ಕಣ್ಣುಗಳ ಮುಂದೆ ಒಪ್ಪಿಗೆಯಿಂದ ನೋಡುವುದಿಲ್ಲ. ಅವಿಶ್ವಾಸಿಗಳು ಮಾಡುವುದನ್ನು ದ್ವೇಷಿಸುವೆನು; ಅದರಲ್ಲಿ ನಾನು ಭಾಗವಹಿಸುವುದಿಲ್ಲ. 
ಮೂರ್ಖಜನರು ನನ್ನಿಂದ ದೂರವಿರುವರು; ದುಷ್ಟತನವನ್ನು ಅರಿಯದಿರುವೆನು. 
ಮರೆಯಾಗಿ ನೆರೆಯವನ ಮೇಲೆ ಚಾಡಿ ಹೇಳುವವನನ್ನು ಸುಮ್ಮನಿರಿಸುವೆನು; ಗರ್ವದ ಕಣ್ಣೂ, ಅಹಂಕಾರದ ಹೃದಯವೂ ಉಳ್ಳವನನ್ನು ಸಹಿಸಲಾರೆನು. 
ದೇಶದಲ್ಲಿರುವ ನಂಬಿಗಸ್ತರನ್ನು ಆರಿಸಿಕೊಳ್ಳುವೆನು; ಅವರೇ ನನ್ನ ಸನ್ನಿಧಿಯಲ್ಲಿ ವಾಸಿಸಬೇಕು; ನಿಷ್ಕಳಂಕವಾಗಿ ನಡೆಯುವವರೇ ನನ್ನ ಸೇವೆಯಲ್ಲಿರಬೇಕು. 
ಮೋಸ ಮಾಡುವವನು ನನ್ನ ಮನೆಯೊಳಗೆ ವಾಸಮಾಡನು; ಸುಳ್ಳಾಡುವವನು ನನ್ನ ಕಣ್ಣುಗಳ ಮುಂದೆ ನಿಂತುಕೊಳ್ಳನು. 
ದುಷ್ಟತನ ಮಾಡುವವರೆಲ್ಲರನ್ನು ಪ್ರತಿ ಮುಂಜಾನೆ ನಿಲ್ಲಿಸಿಬಿಡುವೆನು; ಯೆಹೋವ ದೇವರ ಪಟ್ಟಣದೊಳಗಿಂದ ಪ್ರತಿಯೊಬ್ಬ ದುಷ್ಟನನ್ನು ಹೊರಗೆ ಹಾಕುವೆನು. 
