﻿ಕೀರ್ತನೆಗಳು.
114.
ಇಸ್ರಾಯೇಲರು ಈಜಿಪ್ಟಿನೊಳಗಿಂದಲೂ, ಯಾಕೋಬನ ಮನೆತನವು ಅನ್ಯಭಾಷೆಯುಳ್ಳ ಜನರೊಳಗಿಂದಲೂ ಹೊರಟುಬಂದಾಗ, 
ಯೆಹೂದವು ದೇವರ ಪರಿಶುದ್ಧ ಸ್ಥಳವಾಯಿತು, ಇಸ್ರಾಯೇಲು ದೇವರ ರಾಜ್ಯವಾಯಿತು. 
ಸಮುದ್ರವು ನೋಡಿ ಓಡಿಹೋಯಿತು; ಯೊರ್ದನ್ ನದಿ ಹಿಂದಿರುಗಿತು. 
ಬೆಟ್ಟಗಳು ಟಗರುಗಳಂತೆ ಓಡಿತು, ಗುಡ್ಡಗಳು ಕುರಿಮರಿಗಳಂತೆಯೂ ಓಡಾಡಿದವು. 
ಸಮುದ್ರವೇ, ನಿನಗೆ ಏನಾಯಿತು? ಏಕೆ ಓಡಿ ಹೋಗುತ್ತೀ? ಯೊರ್ದನ್ ನದಿಯೇ, ಏಕೆ ಹಿಂದಿರುಗುತ್ತೀ? 
ಬೆಟ್ಟಗಳೇ, ಟಗರುಗಳ ಹಾಗೆಯೂ; ಚಿಕ್ಕಗುಡ್ಡಗಳೇ, ನೀವು ಕುರಿಮರಿಗಳ ಹಾಗೆಯೂ ಹಾರಾಡುವುದೇಕೆ? 
ಯೆಹೋವ ದೇವರ ಸನ್ನಿಧಿಯಲ್ಲಿಯೂ, ಯಾಕೋಬಿನ ದೇವರ ಮುಂದೆಯೂ ಭೂಮಿಯೇ ನಡುಗು. 
ದೇವರು ಬಂಡೆಯನ್ನು ನೀರಿನ ಕೆರೆಯಾಗಿಯೂ, ಕಗ್ಗಲ್ಲನ್ನು ನೀರಿನ ಬುಗ್ಗೆಯಾಗಿ ಮಾರ್ಪಡಿಸುತ್ತಾರೆ. 
